Sunday, March 25, 2012

ಪಿಯುಸಿಗೆ ಕ್ಲಸ್ಟರ್‌ ಪದ್ಧತಿ ಜಾರಿಗೆ ಹಿಂದೇಟು-ಪ್ರತಿಷ್ಠಿತ ಕಾಲೇಜುಗಳ ಆಡಳಿತ ಮಂಡಳಿಗಳ ಒತ್ತಡವೇ ಇದಕ್ಕೆ ಕಾರಣ-ಉದಯವಾಣಿ ವರದಿ?

  • ಪಿಯುಸಿಗೆ ಕ್ಲಸ್ಟರ್‌ ಪದ್ಧತಿ ಜಾರಿಗೆ ಎಂದು?

    • Udayavani | Mar 24, 2012

      ಕಲಬುರ್ಗಿ: ದಿನಕ್ಕೊಂದು ಪ್ರಶ್ನೆ ಪತ್ರಿಕೆ ಬಹಿರಂಗಗೊಂಡರೆ ಪರೀಕ್ಷೆ ನಡೆಸೋದು ಹೇಗೆ?... ಇದು ಸದ್ಯ ಪಿಯು ಪರೀಕ್ಷಾ ಮಂಡಳಿ ಹಾಗೂ ಶಿಕ್ಷಣ ತಜ್ಞರನ್ನು ಕಾಡುತ್ತಿರುವ ಪ್ರಶ್ನೆ.

      ಪ್ರಶ್ನೆಪತ್ರಿಕೆ ಬಹಿರಂಗಗೊಳ್ಳಲು ಪಿಯು ಮಂಡಳಿ ನಿರ್ಲಕ್ಷéದ ಜತೆಗೆ ಹಲವು ಕಾರಣಗಳಿರಬಹುದು. ಆ ಹಲವು ಕಾರಣಗಳಲ್ಲಿ ಕಳೆದ ಮೂರು ವರ್ಷಗಳಿಂದ ಜಾರಿಗೊಳಿಸಬೇಕೆಂದಿರುವ ಕ್ಲಸ್ಟರ್‌ ಪದ್ಧತಿ ಅಳವಡಿಸದೇ ಇರುವುದೂ ಒಂದು. ಪಿಯುಸಿ ಪರೀಕ್ಷೆಗೂ ಕ್ಲಸ್ಟರ್‌ ಪದ್ಧತಿ ಜಾರಿ ತಂದರೆ ಪರೀಕ್ಷೆಯಲ್ಲಿ ಕಠಿಣತೆ ತರಬಹುದಲ್ಲದೇ ಸಾಮೂಹಿಕ ನಕಲು ತಡೆಯುವುದರ ಜತೆಗೆ ಪ್ರಶ್ನೆ ಪತ್ರಿಕೆ ಬಹಿರಂಗಕ್ಕೂ ಕಡಿವಾಣ ಹಾಕಬಹುದಾಗಿದೆ. ಆಯಾ ಕಾಲೇಜು ಸಂಸ್ಥೆಗಳು ತಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ ಸಹಾಯವಾಗಲೆಂದು ಪ್ರಶ್ನೆಪತ್ರಿಕೆಗಳನ್ನು ಬಹಿರಂಗಗೊಳಿಸುತ್ತಿದ್ದಾರೆ. ಆದರೆ ಒಂದು ಕಾಲೇಜಿನ ವಿದ್ಯಾರ್ಥಿಗಳು ನೂರಾರು ಕಾಲೇಜುಗಳಿಗೆ ಹಂಚಿ ಹೋದರೆ ಪ್ರಶ್ನೆ ಪತ್ರಿಕೆ ಬಹಿರಂಗಪಡಿಸಿದರೂ ವಿದ್ಯಾರ್ಥಿಗಳಿಗೆ ಗೌಪ್ಯವಾಗಿ ತಲುಪಿಸಲು ಸಾಧ್ಯವಿಲ್ಲ. ಈಗ ಆಯಾ ಕಾಲೇಜಿನಲ್ಲಿಯೇ ಪರೀಕ್ಷೆ ಬರೆಯುತ್ತಿರುವುದರಿಂದ ಪ್ರಶ್ನೆ ಪತ್ರಿಕೆ ಬಹಿರಂಗ ಎಂಬ ಎಡವಟ್ಟಿಗೆ ಕಾರಣವಾಗುತ್ತಿದೆ.

      ಪ್ರಶ್ನೆ ಪತ್ರಿಕೆ ಬಹಿರಂಗಕ್ಕೆ ಕಾರಣರಾದ ಉಪನ್ಯಾಸಕರನ್ನು ಅಮಾನತು ಮಾಡಿರಬಹುದು ಲಕ್ಷಾಂತರ ವಿದ್ಯಾರ್ಥಿಗಳ ಆತಂಕ ಕೊನೆಗೊಳ್ಳುವುದೇ ಕಠಿಣ ಪರಿಶ್ರಮದಿಂದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪರೀಕ್ಷೆಗೆ ತಯಾರಾಗುತ್ತಾರೆ. ಆದರೆ ಹೀಗೆ ದಿಢೀರನೇ ಪ್ರಶ್ನೆಪತ್ರಿಕೆ ಬಹಿರಂಗಗೊಂಡು ಪರೀಕ್ಷೆ ಮುಂದೂಡಿದರೆ ಆಗುವ ಅನಾಹುತಗಳಿಗೆ ಯಾರು ಜವಾಬ್ದಾರರು? ಮರು ಪರೀಕ್ಷೆ ನಡೆಸಿದರೆ ಜವಾಬ್ದಾರಿ ಮುಗಿಯಿತೇ? ಎಂದು ವಿದ್ಯಾರ್ಥಿಗಳು ಹಾಗೂ ಪಾಲಕರು ಕೇಳುತ್ತಿದ್ದಾರೆ.

      ಎಸ್‌.ಎಸ್‌.ಎಲ್‌.ಸಿ, ಬಿ.ಎಡ್‌, ಡಿ.ಎಡ್‌. ಎಂ.ಎಡ್‌ ಸೇರಿದಂತೆ ಇತರೆ ಎಲ್ಲ ಪರೀಕ್ಷೆಗಳಿಗೆ ಕ್ಲಸ್ಟರ್‌ ಪದ್ಧತಿ ಅಳವಡಿಸಲಾಗಿದೆ. ಆದರೆ, ಪಿಯುಸಿಗೆ ಮಾತ್ರ ಕ್ಲಸ್ಟರ್‌ ಪದ§ತಿಯಲ್ಲಿ ಪರೀಕ್ಷೆ ನಡೆಸಲು ಮುಂದಾಗುತ್ತಿಲ್ಲ.

      ಕ್ಲಸ್ಟರ್‌ ಎಂದರೇನು?: ಒಂದು ಕಾಲೇಜಿನ ವಿದ್ಯಾರ್ಥಿಗಳನ್ನು ಅಲ್ಫಾಬಿಟ್ಸ್‌ ಪ್ರಕಾರ ವಿವಿಧ ಪರೀûಾ ಕೇಂದ್ರಗಳಿಗೆ ಹಂಚುವುದೇ ಕ್ಲಸ್ಟರ್‌ ಪದ್ಧತಿ. ಈ ಪದ್ಧತಿಯಡಿ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಕಾಲೇಜಿನ ಪರೀಕ್ಷಾ ಕೇಂದ್ರಗಳನ್ನು ಹೊರತುಪಡಿಸಿ ಬೇರೇ ಬೇರೆ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಬೇಕಾಗುತ್ತದೆ.

      ಈ ಕ್ಲಸ್ಟರ್‌ ಪದ್ಧತಿ ಪರೀಕ್ಷೆಯಿಂದ ಸಾಮೂಹಿಕ ನಕಲು ತಡೆಯಬಹುದಾಗಿದೆ. ನಕಲು ತಡೆಯಲು ಹಾಗೂ ಪರೀಕ್ಷೆಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಕ್ಲಸ್ಟರ್‌ ಪದ್ಧತಿ ಜಾರಿಗೆ ತರಲಾಗಿದೆ.

      ಕ್ಲಸ್ಟರ್‌ ಪದ್ಧತಿ ಅಳವಡಿಸಿದರೆ ಪ್ರತಿಷ್ಠಿತ ಕಾಲೇಜು ಹಾಗೂ ಸರಕಾರಿ ಕಾಲೇಜು ಎಂಬ ಭೇದಭಾವವಿಲ್ಲದೆ ಎಲ್ಲ ವಿದ್ಯಾರ್ಥಿಗಳನ್ನು ಸಮೀಕರಣಗೊಳಿಸಬಹುದಾಗಿದೆ. ಈ ಪದ್ಧತಿ ಜಾರಿಗೆ ಬಂದರೆ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳು ಸಹ ಸರಕಾರಿ ಕಾಲೇಜಿನ ಪರೀûಾ ಕೇಂದ್ರದಲ್ಲಿ ಹಾಗೂ ಸರಕಾರಿ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಷ್ಠಿತ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಿದಂತಾಗುತ್ತದೆ.

      ಜಾರಿಗೆ ಹಿಂದೇಟು ಏಕೆ?

      ಪ್ರತಿಷ್ಠಿತ ಕಾಲೇಜುಗಳ ಆಡಳಿತ ಮಂಡಳಿಗಳ ಒತ್ತಡವೇ ಇದಕ್ಕೆ ಕಾರಣವೆಂದು ಹೇಳಲಾಗಿದೆ.

      ಪಿಯುಸಿಗೆ ಕ್ಲಸ್ಟರ್‌ ಪದ್ಧತಿ ಜಾರಿಗೆ ತಂದರೆ ತಮ್ಮ ಸಂಸ್ಥೆಯ ಕಾಲೇಜಿನ ಫಲಿತಾಂಶ ಕುಂಠಿತವಾಗುವುದೆಂಬ ಭೀತಿಯ ಹಿನ್ನೆಲೆಯಲ್ಲಿ ಖಾಸಗಿ ಕಾಲೇಜಿನ ಪಿಯುಸಿ ಕಾಲೇಜಿನ ಆಡಳಿತ ಮಂಡಳಿಗಳು ಸರಕಾರದ ಮೇಲೆ ಒತ್ತಡ ತಂದು ಕ್ಲಸ್ಟರ್‌ ಪದ್ಧತಿ ಜಾರಿಯಾಗದಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಲಾಗುತ್ತಿದೆ.

      ಮುಂದಿನ ವರ್ಷ ಜಾರಿ

      ಪ್ರಶ್ನೆಪತ್ರಿಕೆ ಬಹಿರಂಗಗೊಂಡ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಗುರುವಾರ ತುರ್ತುಸಭೆ ಸೇರಿದ ಪಿಯು ಆಡಳಿತ ಮಂಡಳಿಯ ನಿರ್ದೇಶಕರು, ಮುಂದಿನ ವರ್ಷದಿಂದ ಕಡ್ಡಾಯವಾಗಿ ಕ್ಲಸ್ಟರ್‌ ಪದ್ಧತಿ ಪರೀಕ್ಷೆ ಜಾರಿ ತರುವ ಬಗ್ಗೆ ದೃಢ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

      ಪರೀಕ್ಷೆ ಮೇಲೆ ಹಿಡಿತ ಸಾಧಿಸಲು ಈ ಪದ್ಧತಿ ಜಾರಿ ತರುವುದು ಅನಿವಾರ್ಯ ಎಂದು ಪಿಯು ಮಂಡಳಿಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಗಟ್ಟಿಯಾಗಿ ಹೇಳಿದ್ದಕ್ಕೆ ಸಭೆಯಲ್ಲಿ ಇದ್ದ ಇತರರು ಬೆಂಬಲ ಸೂಚಿಸಿದರು ಎಂದು ವರದಿಯಾಗಿದೆ. ಮುಂದಿನ ವರ್ಷ ಕ್ಲಸ್ಟರ್‌ ಪದ್ಧತಿ ಜಾರಿ ಬರುವುದು ನಿಶ್ಚಿತ ಎಂದೇ ಹೇಳಲಾಗುತ್ತಿದೆ.

No comments:

Post a Comment